ಪೆರಾಲ್ಡಿಹೈಡ್ 
ಅರಿವಳಿಕ ವಸ್ತು. ಇದೊಂದು ದ್ರವ ಪದಾರ್ಥ. ಇದರ ಅಣುಭಾರ ಅಸಿಟಾಲ್ಡಿಹೈಡಿನ ಅಣುಭಾರಕ್ಕಿಂತ ಕರಾರುವಾಕ್ಕಾಗಿ ಮೂರು ಪಾಲು ದೊಡ್ಡದು. ಇದನ್ನು 1882ರಲ್ಲಿ ಸರ್ವೆಲ್ಲೇ ಮೊದಲ ಬಾರಿಗೆ ವೈದ್ಯಕೀಯದಲ್ಲಿ ಬಳಕೆಗೆ ತಂದ. ಕಾರ್ಬನಿಕ ರಸಾಯನ ವಸ್ತುಗಳ ತಯಾರಿಕೆಯಲ್ಲಿ ಮೂಲ ವಸ್ತುವಾಗಿ ಪೆರಾಲ್ಡಿಹೈಡನ್ನು ಉಪಯೋಗಿಸಲಾಗುತ್ತಿತ್ತು. ಇದು ಪಾರಕವೂ ನಿರ್ವರ್ಣವೂ ಆದ ವಸ್ತು. ಇದಕ್ಕೆ ವಿಶಿಷ್ಟವಾದ ಪರಿಮಳವಿದೆ. ಉರಿ ಉಂಟು ಮಾಡಿ ತುಂಬ ಅಹಿತಕರ ರುಚಿ ಕೊಡುತ್ತದೆ. ಇದು ವಾಯು ಮತ್ತು ಬೆಳಕಿನ ಪ್ರಭಾವಕ್ಕೆ ಒಳಪಟ್ಟಾಗ ಅಸಿಟಾಲ್ಡಿಹೈಡ್ ಆಗಿ ಭಿನ್ನಗೊಂಡು ಅನಂತರ ಅಸಿಟಿಕ್ ಆಮ್ಲವಾಗಿ ಉತ್ಕರ್ಷಿಸುತ್ತದೆ. ಇದರಿಂದಾಗಿ ಈ ದ್ರವವನ್ನು ಸರಿಯಾದ ಮುಚ್ಚಳವಿರುವ ಶಿಲಾರಾಳ ಬಣ್ಣದ ಕುಪ್ಪಿಗಳಲ್ಲಿ ಸಂಗ್ರಹಿಸಬೇಕು.

	ಶತಮಾನಗಳಿಂದಲೇ ಪೆರಾಲ್ಡಿಹೈಡ್ ಬಳಕೆಯಲ್ಲಿದ್ದರೂ ಇದರ ಗುಣವಿಶೇಷ, ವಿಷಾರಿ ಪ್ರಭಾವ, ತಯಾರಿಕೆಯ ವಿಧಾನ ಮತ್ತು ಉಪಾಪಚಯದ ಬಗ್ಗೆ ಇನ್ನೂ ಸಮರ್ಪಕವಾಗಿ ತಿಳಿದಿಲ್ಲ. ಚಿಕಿತ್ಸೆಗೆ ಬಳಸುವ ಪ್ರಮಾಣದಲ್ಲಿ ಈ ವಸ್ತು ಉಸಿರಾಟ ಮತ್ತು ರಕ್ತ ಒತ್ತಡದ ಮೇಲೆ ಯಾವ ಪ್ರಭಾವವನ್ನೂ ಹೊಂದಿಲ್ಲ. ಆದರೆ, ಆ ಪ್ರಮಾಣ ತುಂಬ ಹೆಚ್ಚಿದಾಗ ಉಸಿರಾಟವನ್ನು ಕುಗ್ಗಿಸಬಲ್ಲದು, ಮತ್ತು ರಕ್ತದ ಒತ್ತಡವನ್ನು ಇಳಿಸಬಲ್ಲದು. ಬಾಯಿ ಮೂಲಕ ಊದಿದಾಗ ವೇಗವಾಗಿ ಹೀರಲ್ಪಡುತ್ತದೆ. ಇದರ 70%-80% ಭಾಗ ಈಲಿಯಲ್ಲಿ ಉಪಾಪಚಯಗೊಳ್ಳುತ್ತದೆ. 11%-28% ಭಾಗ ಉಸಿರಿನ ಮೂಲಕ ಹೊರಹೋಗುತ್ತದೆ. ಮೂತ್ರದಲ್ಲಿ ವಿಸರ್ಜನೆ ಹೊಂದುವ ಪ್ರಮಾಣ ಅತ್ಯಲ್ಪ. ಈಲಿಯ ಕಾರ್ಯ ಅತೃಪ್ತಿಕರವಾಗಿದ್ದಾಗ ಉಸಿರಾಟ ಮಂಡಲದ ಮೂಲಕ ವಿಸರ್ಜನೆ ಹೊಂದುವ ಪ್ರಮಾಣ ತುಂಬ ಹೆಚ್ಚುತ್ತದೆ. 

	ನಾಲ್ಕೆಂಟು ಮಿಲಿಲೀಟರ್ ಪೆರಾಲ್ಡಿಹೈಡ್ ದ್ರವವನ್ನು ಬಾಯಿಯಿಂದ ಸೇವಿಸಿದಾಗ ಇದು ಹತ್ತು ಹದಿನೈದು ಮಿನಿಟ್ಟುಗಳಲ್ಲಿ ನಿದ್ರೆ ತರಿಸಬಲ್ಲದು. ಬಲು ಕಾಲದಿಂದಲೂ ಇದನ್ನು ಸುರಕ್ಷಿತ ನಿದ್ರಾಜನಕವಸ್ತುವೆಂದು ಪರಿಗಣಿಸಲಾಗಿದ್ದಿತು. ಆದರೆ, ನಿಜಕ್ಕೂ ಇದು ಸರ್ವಮಾನ್ಯ ಬಳಕೆಯ ಜನಪ್ರಿಯ ಔಷಧವಾಗಿಲ್ಲ. ಅಹಿತಕರ ವಾಸನೆ ಮತ್ತು ರುಚಿಯಿಂದಾಗಿ ಇದರ ಬಳಕೆ ಕಡಿಮೆಯಾಗಿದೆ. ಇದಕ್ಕೆ ನೋವನ್ನು ಶಮನ ಮಾಡುವ ಸಾಮಥ್ರ್ಯವಿಲ್ಲ. ಪೆರಾಲ್ಡಿಹೈಡನ್ನು ವೈದ್ಯಕೀಯ ನಿರೀಕ್ಷಣೆಗೊಳಪಟ್ಟ ರೋಗಿಗಳಲ್ಲಿ ಮಾತ್ರ ಬಳಸಲಾಗುತ್ತದೆ. ಇದು ಸೆಳವಿನ ವಿರುದ್ಧ ಪ್ರಭಾವಶಾಲಿ ಧನುರ್ವಾಯು, ಬಸಿರುನಂಜು ಮತ್ತು ಬಿಡದೆ ಬರುವ ಮೂರ್ಛಾರೋಗದಲ್ಲಿಯ ಸೆಳವನ್ನು ತಹಬಂದಿಗೆ ತರಲು ಇದರ ಉಪಯೋಗ ಉಂಟು. ಮದ್ಯಪಾನದಿಂದ ಭ್ರಮಣೆ, ಮತ್ತು ನಡುಕ ಹೊಂದಿದ ವ್ಯಕ್ತಿಗಳಲ್ಲಿ ಮದ್ಯಪಾನ ಪದ್ಧತಿ ತಪ್ಪಿಸಲು ಇದನ್ನು ಉಪಯೋಗಿಸಲಾಗುತ್ತದೆ. ಇದರ ರುಚಿ ಮತ್ತು ವಾಸನೆಯಿಂದಾಗಿ ಅಂಥ ಚಟದವರು ಮದ್ಯಪಾನವನ್ನು ಬಿಟ್ಟುಬಿಡುತ್ತಾರೆ; ಈ ವಸ್ತುವಿನ ದಾಸರೂ ಆಗುವುದಿಲ್ಲ. ಪೆರಾಲ್ಡಿಹೈಡನ್ನು ಬಾಯಿಯಿಂದ 5-10 ಮಿಲಿಲೀಟರ್ ಪ್ರಮಾಣದಲ್ಲಿ ತಣ್ಣೀರಿನೊಡನೆ ಮಿಶ್ರಮಾಡಿ ಕೊಡಲಾಗುವುದು. ಕೆಲವೊಮ್ಮೆ ಇದನ್ನು ಗುದನಾಳದೊಳಕ್ಕೆ ವಸ್ತಿರೂಪದಲ್ಲಿ ಸೇರಿಸಲಾಗುವುದು. ಆಗ ಅದನ್ನು ಆಲಿವ್ ಎಣ್ಣೆಯೊಡನೆ ಮಿಶ್ರ ಮಾಡಿ ಕೊಡಲಾಗುವುದು. ಪೆರಾಲ್ಡಿಹೈಡ್ ಲೋಳೆಪೊರೆಯ ಕೆರಳಿಕೆ ಮತ್ತು ಉರಿ ಉಂಟುಮಾಡುವುದನ್ನು ತಪ್ಪಿಸಲು ಹೀಗೆ ಸಾರಗುಂದಿಸಿ ಕೊಡಬೇಕಾಗುವುದು. ಇದನ್ನು ದೇಹದೊಳಕ್ಕೆ ಚುಚ್ಚಿ ಸೇರಿಸುವುದಕ್ಕೆ ಅಷ್ಟೊಂದು ಪ್ರಾಶಸ್ತ್ಯವಿಲ್ಲ. ಸ್ನಾಯುವಿನಾಶಕ್ಕೆ ನಾಲ್ಕೈದು ಮಿಲಿಲೀಟರ್ ಪೆರಾಲ್ಡಿಹೈಡನ್ನು ಚುಚ್ಚಿ ಕೊಡಬಹುದು. ಇದನ್ನು ರಕ್ತನಾಳಾಂತರವಾಗಿ ಕೊಡುವುದಿಲ್ಲ.
(ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ